ಡಾ. ಯು.ಆರ್.ಅನಂತಮೂರ್ತಿ :
ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ತಮ್ಮ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.
ಜನನ :
ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 'ಮೇಳಿಗೆ' ಹಳ್ಳಿಯಲ್ಲಿ, ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ (ಸತ್ಯಭಾಮ).
ವಿದ್ಯಾಭ್ಯಾಸ :
'ದೂರ್ವಾಸಪುರ'ದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು.
ವೃತ್ತಿ ಜೀವನ :
ಹಾಸನ, ಶಿವಮೊಗ್ಗ , ಮೈಸೂರುಗಳಲ್ಲಿ ಇಂಗ್ಲೀಷ್ ಉಪನ್ಯಾಸಕ
ಮೈಸೂರು ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲ...